Wednesday, April 20, 2016

ಹ್ಯಾಲಿ ಧೂಮಕೇತು

ಧೂಮಕೇತು ಎಂದಾಗ ಮೊದಲಿಗೆ ನೆನಪಾಗುವುದು ಹ್ಯಾಲಿ ಧೂಮಕೇತು. ಹ್ಯಾಲಿ ಧೂಮಕೇತುವಿನ ವೈಜ್ಞಾನಿಕ ಹೆಸರು ೧ಪಿ/ಹ್ಯಾಲಿ. ಹೆಸರೇ ಹೇಳುವಂತೆ ಇದು ಮೊಟ್ಟ ಮೊದಲನೆಯ periodic ಧೂಮಕೇತು. ಈ ಧೂಮಕೇತುವಿನ ಅನ್ವೇಷಣೆಯ ಹಿಂದೆ ಒಂದು ಸ್ವಾರಸ್ಯಕಾರಿ ಕಥೆ ಇದೆ. 
ಹದಿನೇಳನೇ ಶತಮಾನದವರೆಗೂ ನಮಗೆ ಧೂಮಕೇತುಗಳ ಬಗ್ಗೆ ಹೆಚ್ಚಾಗಿ ತಿಳಿದಿರಲಿಲ್ಲ. ಧೂಮಕೇತುಗಳು ವಿನಾಶದ ಮುನ್ಸೂಚನೆ ಎಂದೇ ಜನರ ಭಾವನೆಯಾಗಿತ್ತು. ಶೇಕ್ಸ್ ಪಿಯರ್ ಒಂದು ನಾಟಕದಲ್ಲಿ ಹೀಗೆ ಹೇಳಿದ್ದ "When beggars die there are no comets seen; The heavens themselves blaze forth the death of princes".
ಈ ಸಮಯದಲ್ಲಿ ಎಡ್ಮಂಡ್ ಹ್ಯಾಲಿ, ಹಿಂದೆ ಕಂಡಿದ್ದ ಧೂಮಕೇತುಗಳ ಬಗ್ಗೆ ಅಧ್ಯಯನ ಮಾಡಲಾರಂಭಿಸಿದ. ಸುಮಾರು ಮೂರು ಶತಮಾನಗಳಲ್ಲಿ ಕಂಡಿದ್ದ ೨೪ ಧೂಮಕೇತುಗಳ ಬಗ್ಗೆ ಅಧ್ಯಯನ ನಡೆಸಿದಾಗ ಅವನಿಗೆ ಕುತೂಹಲ ಮೂಡಿಸಿದ್ದು ೧೫೩೧, ೧೬೦೭, ೧೬೮೨ರಲ್ಲಿ ಕಂಡಿದ್ದ ಮೂರು ಧೂಮಕೇತುಗಳು. ಈ ಮೂರರ ಪಥ ಒಂದೇ ಇದ್ದು ಇನ್ನೂ ಅನೇಕ ಗುಣಗಳು ತಾಳೆಯಾಗುತ್ತಿದ್ದವು. ಆಗ ಹ್ಯಾಲಿ ಈ ಮೂರೂ ಧೂಮಕೇತುಗಳೂ ಒಂದೇ. ಈ ಧೂಮಕೇತು ೭೬ ವರ್ಷಗಳಿಗೆ ಒಮ್ಮೆ ಸೂರ್ಯನ ಬಳಿ ಬರುತ್ತದೆ, ೧೭೫೮ರಲ್ಲಿ ಈ ಧೂಮಕೇತು ಮತ್ತೆ ಬರಲಿದೆ ಎಂದು ಭವಿಷ್ಯ ನುಡಿದ. ಅವನು ಹೇಳಿದಂತೆ ಧೂಮಕೇತು ಮತ್ತೆ ಕಾಣಿಸಿತು. ಆದರೆ ಇದಕ್ಕೆ ೧೬ ವರ್ಷ ಮೊದಲೇ ಹ್ಯಾಲಿ ತೀರಿಹೋಗಿದ್ದ. ವಿಜ್ಞಾನಿಗಳು ಈ ಧೂಮಕೇತುವಿಗೆ ಹ್ಯಾಲಿ ಧೂಮಕೇತು ಎಂದೇ ನಾಮಕರಣ ಮಾಡಿದರು. 
ಹ್ಯಾಲಿ ಧೂಮಕೇತುವಿನ ಇನ್ನೊಂದು ಸ್ವಾರಸ್ಯಕರ ಘಟನೆ ಹೀಗಿದೆ. ೧೯೦೯ರಲ್ಲಿ ಖ್ಯಾತ ಕವಿ ಮಾರ್ಕ್ ಟ್ವೇನ್ ಹೀಗೆ ಹೇಳಿದ "I came in with Halley's Comet in 1835. It is coming again next year, and I expect to go out with it".
೧೯೧೦ರಲ್ಲಿ ಹ್ಯಾಲಿ ಧೂಮಕೇತು ಸೂರ್ಯನ ಅತಿ ಸಮೀಪದಲ್ಲಿ ಹಾದುಹೋಗಿ ಮತ್ತೆ ಕಾಣಿಸಿದ ದಿನವೇ ಮಾರ್ಕ್ ಟ್ವೇನ್ ತೀರಿಹೋದ.
೧೯೧೦ರ ವೇಳೆಗಾಗಲೇ ವಿಜ್ಞಾನ ತುಂಬಾ ಮುಂದುವರೆದಿತ್ತು. ಆಕಾಶ ಕಾಯಗಳ ಬೆಳಕಿನಲ್ಲಿರುವ ಬಣ್ಣಗಳನ್ನು ಪರಿಶೀಲಿಸಿ ಅದರ ಸಂಯೋಜನೆಯನ್ನು ತಿಳಿಯುವ "ಸ್ಪೆಕ್ಟ್ರೋಸ್ಕೊಪಿ" ಎಂಬ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿತ್ತು. ಹ್ಯಾಲಿ ಧೂಮಕೇತುವನ್ನು ಸ್ಪೆಕ್ಟ್ರೋಸ್ಕೊಪಿಗೆ ಒಳಪಡಿಸಿದಾಗ ಅದರಲ್ಲಿ ಸಯನೈಡ್ ಅನಿಲ ಇರುವುದು ಪತ್ತೆಯಾಯಿತು. ಅದೇ ಸಮಯಕ್ಕೆ ಖಗೋಳ ತಜ್ಞರು ಭೂಮಿ ಹ್ಯಾಲಿ ಧೂಮಕೇತುವಿನ ಬಾಲದ ಮೂಲಕ ಹಾದುಹೋಗುವುದೆಂದು ಪತ್ತೆ  ಮಾಡಿದರು. ಜನರನ್ನು ಭಯ ಪಡಿಸಲು ಇಷ್ಟು ಸಾಕಾಯ್ತು. ವಿಜ್ಞಾನಿಗಳು ಇದರಿಂದ ಯಾವುದೇ ಹಾನಿಯಿಲ್ಲವೆಂದು ಬಾರಿ ಬಾರಿ ಹೇಳಿದರೂ ಪತ್ರಿಕೆಗಳು "ಸಯನೈಡ್ ನಿಂದ ಜೀವ ಸಂಕುಲ ನಾಶವಾಗಲಿದೆ" ಎಂದು ಸುದ್ದಿ ಮಾಡಿದವು, ಜನ ಸಯನೈಡ್ ನಿಂದ ಉಳಿಯಲು "ವಿಶಿಷ್ಟ ಮುಖವಾಡ" ಧರಿಸಿ, "ಆಂಟಿ ಸಯನೈಡ್ ಮಾತ್ರೆ"ಗಳನ್ನು ನುಂಗಿದರು. 
ಮೇ ೧೯, ೨೦೧೦ರಂದು ಭೂಮಿ ಹ್ಯಾಲಿ ಧೂಮಕೇತುವಿನ ಬಾಲದ ಮೂಲಕ ಹಾದುಹೋಯಿತು. ೮ ಗಂಟೆಗಳ ಕಾಲ ಜನ ಉಸಿರು ಬಿಗಿಹಿಡಿದು ಕಾದರು. ಯಾರೂ ಸಾಯಲಿಲ್ಲ. ಯಾರ ಆರೋಗ್ಯವೂ ಕೆಡಲಿಲ್ಲ. ಆದರೆ ಮಾತ್ರೆ, ಮುಖವಾಡಗಳನ್ನು ಮಾರಿದವರು ಮಾತ್ರ ಶ್ರೀಮಂತರಾದರು. 

Tuesday, April 19, 2016

ಧೂಮಕೇತು ೨೫೨ಪಿ/ಲೀನಿಯರ್


ನನಗೆ ಮೊದಲ ಬಾರಿಗೆ ಆಕಾಶದ ಬಗ್ಗೆ ಆಸಕ್ತಿ ಹುಟ್ಟಿದ್ದು ೧೯೯೭ರಲ್ಲಿ ಹೇಲ್-ಬಾಪ್ಪ್ ಧೂಮಕೇತು ನೋಡಿದಾಗ. ನಾನು ಆಗ ೭ನೇ ತರಗತಿಯಲ್ಲಿದ್ದೆ. ಪ್ರಜಾವಾಣಿಯಲ್ಲಿ ಧೂಮಕೇತುವಿನ ಬಗ್ಗೆ ಓದಿ ಸೂರ್ಯ ಮುಳುಗುತ್ತಿದ್ದಂತೆಯೇ ಎತ್ತರದ ಕಟ್ಟಡದ ಮೇಲೆ ಹೋಗಿ ಕೂರುತ್ತಿದ್ದೆ. ರಾತ್ರಿ ಏಳಕ್ಕೆ ಸರಿಯಾಗಿ ಕರೆಂಟು ಹೋದರೆ ಮತ್ತೆ ಬರುತ್ತಿದ್ದುದು ಎಷ್ಟು ಹೊತ್ತಿಗೋ. ಆದರೆ ಕರೆಂಟು ಹೋದ ತಕ್ಷಣ ಆಕಾಶದ ತುಂಬಾ ನಕ್ಷತ್ರಗಳು... ಎಣಿಸಲಾರದಷ್ಟು... ದಿಟ್ಟಿಸಿ ನೋಡಿದರೆ ಆಕಾಶಗಂಗೆಯ ನಕ್ಷತ್ರದ ಸಾಲು ಕೂಡ. ಇವೆಲ್ಲದರ ನಡುವೆ highlight ಹೇಲ್ ಬಾಪ್ಪ್ ಧೂಮಕೇತು. ನಾನು ಮೊದಲ ಬಾರಿ ನೋಡಿದಾಗ ಅದು ಬರಿ ಒಂದು ಹತ್ತಿಯ ಉಂಡೆಯಂತೆ ಕಂಡಿತು. ಸ್ವಲ್ಪ ಹೊತ್ತಿನ ನಂತರ ಬಾಲವೂ ಕಾಣಿಸಿತು. ನನಗಾದ ಖುಶಿ ನಾನೇ ಆ ಧೂಮಕೇತುವನ್ನು ಕಂಡು ಹಿಡಿದಂತೆ.

ಕಳೆದ ವಾರ ಒಂದು ರಾತ್ರಿ ಆಕಾಶದ ಚಿತ್ರಗಳನ್ನು ತೆಗೆಯಲು ನನ್ನ ಸ್ನೇಹಿತರ ತೋಟಕ್ಕೆ ಹೋಗಿದ್ದೆ. ಅವರ ತೋಟ ನಗರ ಪ್ರದೇಶದಿಂದ ದೂರ ಇರುವುದರಿಂದ ಅಲ್ಲಿ ಹೆಚ್ಚು ನಕ್ಷತ್ರಗಳು ಕಾಣಿಸುತ್ತವೆ. ರಾತ್ರಿ ಸುಮಾರು 3 ಗಂಟೆಗೆ ವೃಷ್ಚಿಕ ರಾಶಿ ಆಗಲೇ ತಲೆಯ ಮೇಲೆ ಬಂದಿತ್ತು. ನಮ್ಮ ಗೆಲಾಕ್ಸಿ ಕ್ಷೀರಪಥ ಸ್ವಲ್ಪ ಮಟ್ಟಿಗೆ ಕಾಣುತ್ತಿತ್ತು. ಕ್ಯಾಮೆರಾವನ್ನು tripod ಮೇಲಿಟ್ಟು ಹಲವು ಚಿತ್ರಗಳನ್ನು ತೆಗೆದು ಮನೆಗೆ ಬಂದೆ. ಮನೆಯಲ್ಲಿ ಆ ಚಿತ್ರಗಳನ್ನು ಸಂಸ್ಕರಿಸಲು photoshop ತೆಗೆದರೆ ಚಿತ್ರದಲ್ಲಿ ಕ್ಷೀರ ಪಥದ ನಡುವೆ ಒಂದು ಹಸಿರು ಬಣ್ಣದ ಚುಕ್ಕೆ. ಅರೆ, ಈ ಚುಕ್ಕೆಯನ್ನು ನಾನು ಯಾವತ್ತೂ ನೋಡಿಲ್ಲವಲ್ಲಾ ಎಂದುಕೊಂಡು zoom ಮಾಡಿ ನೋಡಿದರೆ ಅದು ಧೂಮಕೇತುವಿನಂತೆ ಕಂಡಿತು. ಧೂಮಕೇತುವನ್ನು ಯಾರು ಕಂಡುಹಿಡಿಯುತ್ತಾರೋ ಅವರ ಹೆಸರನ್ನೇ ಧೂಮಕೇತುವಿಗೆ ಇಡುವುದು ವಾಡಿಕೆ. ಹಾಗಾದರೆ ನನ್ನ ಚಿತ್ರದಲ್ಲಿ ಕಂಡದ್ದು "ಕಾಮೆಟ್ ಕೀರ್ತಿ ಕಿರಣ್ ಆಗಬಹುದೇ??"... ನನ್ನ ಕಲ್ಪನೆ ಎಲ್ಲೆಲ್ಲಿಯೋ ಹೋಗುವ ಮೊದಲು ಅಂತರ್ಜಾಲದಲ್ಲಿ ಹುಡುಕಿದೆ. ಆಗ ತಿಳಿದದ್ದು ಅದು ಈಗಾಗಲೇ ಕಂಡುಹಿಡಿದಿರುವ ಧೂಮಕೇತು ೨೫೨ಪಿ/ಲೀನಿಯರ್ ಎಂದು.

ಲೀನಿಯರ್ ಎನ್ನುವುದು ಒಂದು sky survey. ಯಂತ್ರ ಚಾಲಿತ ದೂರ ದರ್ಶಕಗಳು ಇಡೀ ರಾತ್ರಿ ಆಕಾಶದ ಚಿತ್ರಗಳನ್ನು ತೆಗೆದು ತಂತ್ರಾಂಶದ ಸಹಾಯದಿಂದ ಮಾನವನ ಹಸ್ತಕ್ಷೇಪವಿಲ್ಲದೆ ಅತಿ ಮಂಕಾದ ಧೂಮಕೇತು ಹಾಗೂ ಕ್ಷುದ್ರಗ್ರಹಗಳನ್ನು ಹುಡುಕುತ್ತವೆ. ಹೀಗೆ ಕಂಡು ಹಿಡಿದ ಎಲ್ಲಾ ಧೂಮಕೇತುಗಳ ಹೆಸರೂ ಲೀನಿಯರ್ ಎಂದೇ ಇರುತ್ತದೆ. ಈ sky survey ಆಗಲೇ ಲಕ್ಷಕ್ಕೂ ಹೆಚ್ಚು ಕ್ಷುದ್ರಗ್ರಹಗಳು, ಅನೇಕ ಧೂಮಕೇತುಗಳನ್ನು ಪತ್ತೆ ಹಚ್ಚಿದೆ. ಇಡೀ ವರ್ಷ ಪ್ರತಿ ರಾತ್ರಿಯೂ ಕೆಲಸ ಮಾಡುವ ಈ ದೂರದರ್ಶಕದ ಕಣ್ಣು ತಪ್ಪಿಸಿ ಧೂಮಕೇತುನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ :(

ಚಿತ್ರ:
ಮೇಲೆ-ಮಧ್ಯೆ: ಹಸಿರು ಚುಕ್ಕಿ ೨೫೨ಪಿ/ಲೀನಿಯರ್ ಧೂಮಕೇತು
ಕೆಳಗೆ: ಕ್ಷೀರಪಥದ ಒಂದು ಭಾಗ.



೨೫೨ಪಿ/ ಲೀನಿಯರ್ ನಲ್ಲಿ "ಪಿ" ಎಂದರೆ ಪೀರಿಯಾಡಿಕ್ ಎಂದರ್ಥ. ಈ ಧೂಮಕೇತು ಸೂರ್ಯನ ಸುತ್ತ ೫.೩೩ ವರ್ಷಗಳಿಗೊಮ್ಮೆ ಸುತ್ತುಹಾಕುತ್ತದೆ. ತನ್ನ ಪಥದಲ್ಲಿ ಭೂಮಿ ಹಾಗೂ ಗುರು ಗ್ರಹದ ಹತ್ತಿರ ಚಲಿಸುವ ಈ ಧೂಮಕೇತುವಿನ ಪಥ ಗುರುವಿನ ಗುರುತ್ವಾಕರ್ಷಣ ಶಕ್ತಿಯಿಂದ ಅನೇಕ ಬಾರಿ ಬದಲಾಗಿದೆ. 
ಈ ಧೂಮಕೇತು ಸದ್ಯಕ್ಕೆ ಓಫಿಯೋಕಸ್ ರಾಶಿಯಲ್ಲಿದೆ. ನೋಡುಗರು ಈ ಕಳಗಿನ ಪುಟದಿಂದ ಹೆಚ್ಚಿನ ಮಾಹಿತಿ ಪಡೆಯಬಹುದು. 

Friday, November 15, 2013

ಆಕಾಶದಲ್ಲಿ ನಾಲ್ಕು ಧೂಮಕೇತುಗಳು

ಎಲ್ಲರೂ ಕಾಯುತ್ತಿರುವ ಧೂಮಕೇತು ಐಸಾನ್.  ಆದರೆ ಈಗ ಆಕಾಶದಲ್ಲಿ ಇನ್ನೂ ಮೂರು ಧೂಮಕೇತುಗಳು ಹೊಳೆಯುತ್ತಿವೆ.
ಅವು ೨P/ಎನ್ಕೆ , C/2012 X1 ಲೀನಿಯರ್ ಹಾಗೂ C/2013 R1 ಲವ್ ಜಾಯ್.
ಆದರೆ ಇವನ್ನು ನೋಡಬೇಕಾದರೆ ಒಂದು ಒಳ್ಳೆಯ ದೂರದರ್ಶಕ ಹಾಗೂ ನಗರದಿಂದ ಆಚೆಗಿನ ಕತ್ತಲೆಯ ಪ್ರದೇಶ ಬೇಕು.
ಇವುಗಳಲ್ಲಿ ಲವ್ ಜಾಯ್ ತುಂಬಾ ಚೆನ್ನಾಗಿ ಹೊಳೆಯುತ್ತಿದೆ. ಇಂದು ಬೆಳಿಗ್ಗೆ ನಾನು ಅದರ ಚಿತ್ರ ತೆಗೆಯಲು ಪ್ರಯತ್ನಿಸಿದೆ. ನನ್ನ ಕ್ಯಾಮೆರಾ ಅನ್ನು ಗಣಕಯಂತ್ರಕ್ಕೆ ಸಿಕ್ಕಿಸಿ, ಒಂದು ಸಾಫ್ಟ್ವೇರ್ ಮೂಲಕ ಕ್ಯಾಮೆರಾ ಅನ್ನು ನಿಯಂತ್ರಿಸಿ ಅನೇಕ ಚಿತ್ರಗಳನ್ನು ತೆಗೆದು, ಅವುಗಳನ್ನು ಒಗ್ಗೂಡಿಸಿ ಕೊನೆಗೆ ನನಗೆ ಸಿಕ್ಕ ಚಿತ್ರ ಇದು.

ಧೂಮಕೇತುವಿನ ಹಸಿರು ತಲೆ ಮತ್ತು ತುಂಬಾ ಕ್ಷೀಣವಾದ ಬಾಲ ಕಾಣಬಹುದು. ಸುತ್ತಲೂ ಇರುವ ಗೆರೆಗಳು ನಕ್ಷತ್ರಗಳು. ಧೂಮಕೇತು ನಕ್ಷತ್ರಗಳ ನಡುವೆ ಚಲಿಸುತ್ತಿರುವುದರಿಂದ ಧೂಮಕೇತುವಿನ ಚಿತ್ರ ತೆಗೆದಾಗ ನಕ್ಷತ್ರಗಳು ಗೆರೆಗಳಂತೆ ಕಾಣುತ್ತವೆ.

Monday, November 11, 2013

ಧೂಮಕೇತು ಐಸಾನ್ ಈಗ ಎಲ್ಲಿದೆ?

ಧೂಮಕೇತು ಐಸಾನ್  © Stephen Wanstall (http://spaceweathergallery.com/full_image.php?image_name=Stephen-Wanstall-Autosave001-3_1384177462.jpg)

ಧೂಮಕೇತು ಐಸಾನ್ ನಿಧಾನವಾಗಿ ಸೂರ್ಯನ ಸಮೀಪ ಬರುತ್ತಿದೆ. ಅಕ್ಟೋಬರ್ ೨ರಂದು ಮಂಗಳ ಗ್ರಹದ ಬಳಿ ಸುಳಿದು ಈಗ (ನವೆಂಬರ್ ೧೧) ಶುಕ್ರ ಗ್ರಹದ ಕಕ್ಷೆಯ ಹತ್ತಿರ ಸಾಗುತ್ತಿದೆ. Magnitude ೮ ರಷ್ಟು ಪ್ರಖರವಾಗಿರುವ ಈ ಧೂಮಕೇತುವನ್ನು ಈಗ ದೂರದರ್ಶಕದಲ್ಲಿ ನೋಡಬಹುದು. ಮೇಲಿರುವ ಚಿತ್ರ ಒಬ್ಬ ಹವ್ಯಾಸಿ ಖಗೋಳ ವೀಕ್ಷಕ ತನ್ನ ಕ್ಯಾಮೆರಾ ಹಾಗೂ ದೂರದರ್ಶಕ ಬಳಸಿ ತೆಗೆದಿರುವ ಐಸಾನ್ ನ ಚಿತ್ರ. ಚಿತ್ರದಲ್ಲಿ ಧೂಮಕೇತುವಿನ ಹಸಿರು ತಲೆ ಹಾಗೂ ಬಿಳಿ ಬಾಲವನ್ನು ನೋಡಬಹುದು. ಸುತ್ತಲಿನ ಗೆರೆಗಳು ನಕ್ಷತ್ರಗಳು. ಧೂಮಕೇತುವು ನಕ್ಷತ್ರಗಳ ನಡುವೆ ಚಲಿಸುತ್ತಿರುವುದರಿಂದ ಧೂಮಕೇತುವಿನ ಚಿತ್ರ ತೆಗೆದಾಗ ನಕ್ಷತ್ರಗಳು ಚಲಿಸಿ ಗೆರೆಗಳಂತೆ ಕಾಣುತ್ತವೆ. 
ನೀವೂ ಧೂಮಕೇತುವನ್ನು ನೋಡಬೇಕೆಂದಿದ್ದರೆ ಬೆಳಿಗ್ಗೆ ಸುಮಾರು ೫ ಗಂಟೆಗೆ ಕನ್ಯಾ ರಾಶಿಯಲ್ಲಿ ದೂರದರ್ಶಕದ ಮೂಲಕ ಕಾಣುತ್ತದೆ. www.heavens-above.com ತಾಣದಲ್ಲಿ ಇದರ ನಿಖರವಾದ ಸ್ಥಾನವನ್ನು ಕಾಣಬಹುದು. 

ಧೂಮಕೇತು ಐಸಾನ್ ಹೀಗೆ ಕಾಣಬಹುದೆ?


ಧೂಮಕೇತು ಐಸಾನ್ ಗೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ ನ ಮೊದಲನೇ ವಾರದಲ್ಲಿ ಧೂಮಕೇತು ಹೇಗೆ ಕಾಣಿಸಬಹುದು ಎಂದು ಮೇಲಿನ ಚಿತ್ರ ತೋರಿಸುತ್ತದೆ. ಸೂರ್ಯ ಹುಟ್ಟುವುದಕ್ಕೆ ಸ್ವಲ್ಪ ಮುಂಚೆ ಮುಂಬೆಳಕಿನ ಸಮಯದಲ್ಲಿ ಪ್ರಾಯಶಃ ದೊಡ್ಡ ಬಾಲದೊಂದಿಗೆ ಹೊಳೆಯಲಿದೆ. ಚಿತ್ರದ ಹಿನ್ನೆಲೆಯಲ್ಲಿ ತಾರಾಗಣಗಳನ್ನೂ, ಬುಧ ಹಾಗೂ ಶನಿ ಗ್ರಹಗಳನ್ನೂ ಕಾಣಬಹುದು.
ಆದರೆ  ಈ ನಿರೂಪಣೆ ಕೇವಲ ಒಂದು ಊಹೆಯಷ್ಟೆ. ಧೂಮಕೇತುಗಳು ಎಷ್ಟು ಪ್ರಖರವಾಗಬಹುದು ಎಂದು ಅಂದಾಜು ಮಾಡುವುದು ತುಂಬಾ ಕಷ್ಟ. ಈ ಹಿಂದೆ ಅನೇಕ ಧೂಮಕೇತುಗಳು ಸದ್ದಿಲ್ಲದೆ  ಕಣ್ಮರೆಯಾಗಿವೆ. ಆದರೆ ಐಸಾನ್ ಹಾಗಾಗದೆ ಆಕಾಶದಲ್ಲಿ ಹೊಳೆಯಲಿ ಎಂದು ಆಶಿಸೋಣ. 

ಐಸಾನ್ ಕ್ಷಣಗಣನೆ ಆರಂಭ

ಆಕಾಶದಲ್ಲಿ ಒಂದು ಅಪರೂಪದ ಅತಿಥಿ ಬರುತ್ತಿದೆ. ಲಕ್ಷಾಂತರ ಕಿಮೀ ದೂರದಿಂದ ಬರುತ್ತಿರುವ ಈ ಹಿಮದ ಚೆಂಡು ಸೂರ್ಯನ ಸಮೀಪ ಹಾದುಹೋಗಿ ಮತ್ತೆ ಕಣ್ಮರೆಯಾಗಲಿದೆ. ಆದರೆ ಹೀಗೆ ಸೂರ್ಯನ ಸಮೀಪ ಹಾಯುವಾಗ ಉದ್ದದ ಬಾಲ ಬೆಳೆಸಿಕೊಂಡು ಒಂದು ಅದ್ಭುತ ಪ್ರದರ್ಶನ ನೀಡಲಿದೆ. ಇದೇ ಧೂಮಕೇತು ಐಸಾನ್. ಧೂಮಕೇತು ಐಸಾನ್ ನ ಪೂರ್ಣ ಹೆಸರು C/2012 S1 (ISON). ಇದನ್ನು ಕಂಡುಹಿಡಿದದ್ದು ವಿಜ್ಞಾನಿಗಳಾದ ನೆವ್ಸ್ಕಿಮತ್ತು  ನೋವಿಚೋನೋಕ್. ಅವರು International Scientific Optical Network ನ ದೂರದರ್ಶಕವನ್ನು ಬಳಸಿ ಈ ಧೂಮಕೇತುವನ್ನು ಹುಡುಕಿದ್ದರಿಂದ ಐಸಾನ್ ಎಂಬ ಹೆಸರು ಬಂತು. 
ಧೂಮಕೇತುಗಳು ಆಕಾಶದಲ್ಲಿ ವಿಶೇಷವೇನಲ್ಲ. ಇಂದು ರಾತ್ರಿ ಸಹ ದೂರದರ್ಶಕದ ಮೂಲಕ ೪ ಧೂಮಕೇತುಗಳನ್ನು ನೋಡಬಹುದು. ಆದರೆ ಐಸಾನ್ ನ ವಿಶೇಷತೆ ಏನೆಂದರೆ ನವೆಂಬರ್ ೨೮ರಂದು ಅದು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿ (೧,೫೦೦,೦೦೦ ಮೈಲ್ಲಿ) ಹಾದ ನಂತರ ದೊಡ್ಡ ಬಾಲದೊಂದಿಗೆ ಆಕಾಶದಲ್ಲಿ ಹೊಳೆಯಲಿದೆ. ಬರಿ ಕಣ್ಣಿಗೆ ಕಾಣಲಿದೆ. ಡಿಸೆಂಬರ್ ನ ಮೊದಲ ವಾರದಲ್ಲಿ ಸೂರ್ಯೋದಯಕ್ಕೆ ಮುಂಚೆ ಪೂರ್ವ ದಿಕ್ಕಿನಲ್ಲಿ ಕಾಣಲಿದೆ.
ಸೆಪ್ಟೆಂಬರ್ ೧೨, ೨೦೧೨ ರಂದು ಇದನ್ನು ಕಂಡುಹಿಡಿದಾಗ ಇದರ ತೂಕ ಮತ್ತು ಕಕ್ಷೆಯನ್ನು ಗಮನಿಸಿ ಇದು ಪೂರ್ಣಚಂದ್ರನಿಗಿಂತ ಉಜ್ವಲವಾಗಿ ಹೊಳೆಯಬಹುದೆಂದು ವಿಜ್ಞಾನಿಗಳು ನಿರೀಕ್ಷಿಸಿದ್ದರು. ಆದರೆ ನಂತರದ ವೀಕ್ಷಣೆಗಳಿಂದ ಇದು ಅಷ್ಟೊಂದು ಪ್ರಖರವಾಗಲಾರದು ಎಂಬ ಅಂಶ ಬೆಳಕಿಗೆ ಬಂತು.
ಹವ್ಯಾಸಿ ಖಗೋಳ ವೀಕ್ಷಕರಾದ ನಾವು ಇದರ ಬರವಿಗಾಗಿ ಕಾತರದಿಂದ ಕಾಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಬ್ಲಾಗಿನಲ್ಲಿ ಹೆಚ್ಚಿನ ವಿಷಯಗಳನ್ನು ಬರೆಯುವುದು ನನ್ನ ಆಶಯ.