ಕಳೆದ ವಾರ ಒಂದು ರಾತ್ರಿ ಆಕಾಶದ ಚಿತ್ರಗಳನ್ನು ತೆಗೆಯಲು ನನ್ನ ಸ್ನೇಹಿತರ ತೋಟಕ್ಕೆ ಹೋಗಿದ್ದೆ. ಅವರ ತೋಟ ನಗರ ಪ್ರದೇಶದಿಂದ ದೂರ ಇರುವುದರಿಂದ ಅಲ್ಲಿ ಹೆಚ್ಚು ನಕ್ಷತ್ರಗಳು ಕಾಣಿಸುತ್ತವೆ. ರಾತ್ರಿ ಸುಮಾರು 3 ಗಂಟೆಗೆ ವೃಷ್ಚಿಕ ರಾಶಿ ಆಗಲೇ ತಲೆಯ ಮೇಲೆ ಬಂದಿತ್ತು. ನಮ್ಮ ಗೆಲಾಕ್ಸಿ ಕ್ಷೀರಪಥ ಸ್ವಲ್ಪ ಮಟ್ಟಿಗೆ ಕಾಣುತ್ತಿತ್ತು. ಕ್ಯಾಮೆರಾವನ್ನು tripod ಮೇಲಿಟ್ಟು ಹಲವು ಚಿತ್ರಗಳನ್ನು ತೆಗೆದು ಮನೆಗೆ ಬಂದೆ. ಮನೆಯಲ್ಲಿ ಆ ಚಿತ್ರಗಳನ್ನು ಸಂಸ್ಕರಿಸಲು photoshop ತೆಗೆದರೆ ಚಿತ್ರದಲ್ಲಿ ಕ್ಷೀರ ಪಥದ ನಡುವೆ ಒಂದು ಹಸಿರು ಬಣ್ಣದ ಚುಕ್ಕೆ. ಅರೆ, ಈ ಚುಕ್ಕೆಯನ್ನು ನಾನು ಯಾವತ್ತೂ ನೋಡಿಲ್ಲವಲ್ಲಾ ಎಂದುಕೊಂಡು zoom ಮಾಡಿ ನೋಡಿದರೆ ಅದು ಧೂಮಕೇತುವಿನಂತೆ ಕಂಡಿತು. ಧೂಮಕೇತುವನ್ನು ಯಾರು ಕಂಡುಹಿಡಿಯುತ್ತಾರೋ ಅವರ ಹೆಸರನ್ನೇ ಧೂಮಕೇತುವಿಗೆ ಇಡುವುದು ವಾಡಿಕೆ. ಹಾಗಾದರೆ ನನ್ನ ಚಿತ್ರದಲ್ಲಿ ಕಂಡದ್ದು "ಕಾಮೆಟ್ ಕೀರ್ತಿ ಕಿರಣ್ ಆಗಬಹುದೇ??"... ನನ್ನ ಕಲ್ಪನೆ ಎಲ್ಲೆಲ್ಲಿಯೋ ಹೋಗುವ ಮೊದಲು ಅಂತರ್ಜಾಲದಲ್ಲಿ ಹುಡುಕಿದೆ. ಆಗ ತಿಳಿದದ್ದು ಅದು ಈಗಾಗಲೇ ಕಂಡುಹಿಡಿದಿರುವ ಧೂಮಕೇತು ೨೫೨ಪಿ/ಲೀನಿಯರ್ ಎಂದು.
ಲೀನಿಯರ್ ಎನ್ನುವುದು ಒಂದು sky survey. ಯಂತ್ರ ಚಾಲಿತ ದೂರ ದರ್ಶಕಗಳು ಇಡೀ ರಾತ್ರಿ ಆಕಾಶದ ಚಿತ್ರಗಳನ್ನು ತೆಗೆದು ತಂತ್ರಾಂಶದ ಸಹಾಯದಿಂದ ಮಾನವನ ಹಸ್ತಕ್ಷೇಪವಿಲ್ಲದೆ ಅತಿ ಮಂಕಾದ ಧೂಮಕೇತು ಹಾಗೂ ಕ್ಷುದ್ರಗ್ರಹಗಳನ್ನು ಹುಡುಕುತ್ತವೆ. ಹೀಗೆ ಕಂಡು ಹಿಡಿದ ಎಲ್ಲಾ ಧೂಮಕೇತುಗಳ ಹೆಸರೂ ಲೀನಿಯರ್ ಎಂದೇ ಇರುತ್ತದೆ. ಈ sky survey ಆಗಲೇ ಲಕ್ಷಕ್ಕೂ ಹೆಚ್ಚು ಕ್ಷುದ್ರಗ್ರಹಗಳು, ಅನೇಕ ಧೂಮಕೇತುಗಳನ್ನು ಪತ್ತೆ ಹಚ್ಚಿದೆ. ಇಡೀ ವರ್ಷ ಪ್ರತಿ ರಾತ್ರಿಯೂ ಕೆಲಸ ಮಾಡುವ ಈ ದೂರದರ್ಶಕದ ಕಣ್ಣು ತಪ್ಪಿಸಿ ಧೂಮಕೇತುನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ :(
ಚಿತ್ರ:
ಮೇಲೆ-ಮಧ್ಯೆ: ಹಸಿರು ಚುಕ್ಕಿ ೨೫೨ಪಿ/ಲೀನಿಯರ್ ಧೂಮಕೇತು
ಕೆಳಗೆ: ಕ್ಷೀರಪಥದ ಒಂದು ಭಾಗ.
೨೫೨ಪಿ/ ಲೀನಿಯರ್ ನಲ್ಲಿ "ಪಿ" ಎಂದರೆ ಪೀರಿಯಾಡಿಕ್ ಎಂದರ್ಥ. ಈ ಧೂಮಕೇತು ಸೂರ್ಯನ ಸುತ್ತ ೫.೩೩ ವರ್ಷಗಳಿಗೊಮ್ಮೆ ಸುತ್ತುಹಾಕುತ್ತದೆ. ತನ್ನ ಪಥದಲ್ಲಿ ಭೂಮಿ ಹಾಗೂ ಗುರು ಗ್ರಹದ ಹತ್ತಿರ ಚಲಿಸುವ ಈ ಧೂಮಕೇತುವಿನ ಪಥ ಗುರುವಿನ ಗುರುತ್ವಾಕರ್ಷಣ ಶಕ್ತಿಯಿಂದ ಅನೇಕ ಬಾರಿ ಬದಲಾಗಿದೆ.
ಈ ಧೂಮಕೇತು ಸದ್ಯಕ್ಕೆ ಓಫಿಯೋಕಸ್ ರಾಶಿಯಲ್ಲಿದೆ. ನೋಡುಗರು ಈ ಕಳಗಿನ ಪುಟದಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.


ಉತ್ತಮ ಪ್ರಯತ್ನ. ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಚಿಕ್ಕ ಮಕ್ಕಳಿಗೆ ಮಾರ್ಗದರ್ಶನವಾಗುತ್ತದೆ. ಖಗೋಳ ಪರಿಚಯವೂ ಆಗುತ್ತದೆ. ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಸಹಾಯವಾಗುತ್ತದೆ. ಲೇಖನ ಉತ್ತಮವಾಗಿದೆ. ಹೀಗೆಯೇ ಮುಂದುವರಿಯಲಿ.
ReplyDelete